ಕ್ರಿಶ್ಚನ್ ಸೈನ್ಸ್ ಪಂಥ

	ಕ್ರಿಶ್ಚನ್ ಸೈನ್ಸ್ ಎಂಬ ಪದ, ಒಂದು ಬಗೆಯ ಹೊಸನಂಬಿಕೆ, ಒಂದು ಬಗೆಯ ಕ್ರೈಸ್ತ ಸಮಾಜ ವ್ಯವಸ್ಥೆ ಒಂದು ಬಗೆಯ ಮತೀಯ ಚಳವಳಿ, ಒಂದು ಬಗೆಯ ಜೀವನ ವಿಧಾನ, ಒಂದು ಜೀವನ ತತ್ತ್ವ- ಈ ಎಲ್ಲವನ್ನೂ ನಿರ್ದೇಶಿಸುತ್ತದೆ. ಮೊಟ್ಟ ಮೊದಲಿಗೆ (1862) ಮೇರಿ ಬೇಕರ್ ಎಡ್ಡಿಯೆಂಬಾಕೆ ಪ್ರಾಚೀನ ಕ್ರೈಸ್ತ ತತ್ತ್ವದಲ್ಲಡಗಿದ್ದು ಜನರ ದೃಷ್ಟಿಯಿಂದ ಮರೆಯಾದ ಅಂಶಗಳಲ್ಲಿ ಮುಖ್ಯವಾಗಿ ರೋಗಗ್ರಸ್ತವಾದ ಆತ್ಮಕ್ಕೆ ನೆಮ್ಮದಿಯುಂಟು ಮಾಡುವ ಈ ವಿಧಾನವನ್ನು ಪುನರುತ್ಥಾಪನೆ ಮಾಡಿದಳು. ಯೇಸು ಉಪಯೋಗಿಸಿದ ಚಿಕಿತ್ಸಾ ವಿಧಾನವನ್ನು ತಾನು ಹೊಸದಾಗಿ ಗುರುತಿಸಿ ಅದನ್ನು ಜನರಲ್ಲಿ ಪ್ರಚಾರ ಮಾಡುವುದೇ ತನ್ನ ಮುಖ್ಯ ಉದ್ದೇಶವೆಂದು ಆಕೆ ಹೇಳಿರುತ್ತಾಳೆ. ಈ ಚಿಕಿತ್ಸಾ ವಿಧಾನವನ್ನು ಅವಳು ಪ್ರಚಾರ ಮಾಡಲು ಒಂದು ಕ್ರೈಸ್ತ ಸಂಘವನ್ನು ಏರ್ಪಡಿಸಿದಳು. ಈ ವಿಧಾನವನ್ನು ನಂಬಿ ಅದರಿಂದ ಪ್ರಯೋಜನ ಪಡೆದ ಜನರೇ ಈ ಸಂಘದ ಸದಸ್ಯರಾದರು. ಅದರಿಂದ ತಮ್ಮ ದೈಹಿಕ ಮತ್ತು ಮಾನಸಿಕ ವ್ಯಾಧಿಗಳನ್ನು ಪರಿಹರಿಸಿ ಕೊಂಡವರು ತಮ್ಮ ಅನುಭವಗಳನ್ನು ಈ ಸಂಘದ ಮೂಲಕ ಹೆಚ್ಚು ಜನರಲ್ಲಿ ಪ್ರಚಾರ ಮಾಡಿ ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದರು. ಈ ಚಿಕಿತ್ಸಾ ವಿಧಾನ ಔಷಧಿಗಳಿಂದ, ಶಸ್ತ್ರಚಿಕಿತ್ಸೆಯಿಂದ ರೋಗಗಳನ್ನು ಗುಣಪಡಿಸುವ ವೈದ್ಯಕೀಯ ವಿಧಾನಕ್ಕಿಂತ ಭಿನ್ನ. ಭಕ್ತಿಯ ಬಲದಿಂದ ರೋಗಗಳನ್ನು ನಿವಾರಿಸಿಕೊಳ್ಳುವ ಈ ವಿಧಾನವನ್ನು ಮಂತ್ರ ವಿಧಾನವೆಂದು ಹೇಳಬಹುದು.

	ಕ್ರಿಶ್ಚನ್ ಸೈನ್ಸ್ ಬರಿಯ ಚಿಕಿತ್ಸಾ ವಿಧಾನವೇ ಅಲ್ಲ, ಇದು ಒಂದು ಕ್ರೈಸ್ತಮತ ಮೀಮಾಂಸೆ ಕೂಡ. ಇದು ಸಾಮಾನ್ಯವಾಗಿ ಕ್ರೈಸ್ತಮತ ಮೀಮಾಂಸೆ ಉಪಯೋಗಿಸುವ, ದೇವರು, ಕ್ರಿಸ್ತ, ಸ್ವರ್ಗ, ಮುಕ್ತಿ ಮುಂತಾದ ಮಾತುಗಳನ್ನು ಒಂದು ಹೊಸ ಅರ್ಥದಲ್ಲಿ ಉಪಯೋಗಿಸುತ್ತದೆ. ದೇವರು ಅಂದರೆ ಅಪೌರುಷೇಯತತ್ತ್ವ. ಎಡ್ಡಿ ತನ್ನ ಸೈನ್ಸ್ ಅಂಡ್ ಹೆಲ್ತ್ ಎಂಬ ಗ್ರಂಥದಲ್ಲಿ ದೇವರನ್ನು ಅಶರೀರಿ, ದಿವ್ಯ, ಪರಮ ಹಾಗೂ ಅನಂತಚೇತನಿ, ಆತ್ಮ ಸ್ವರೂಪಿ, ತತ್ತ್ವ, ಮುಖ್ಯಪ್ರಾಣ, ಸತ್ಯ ಮತ್ತು ಪ್ರೀತಿರೂಪ-ಎಂದು ಬಣ್ಣಿಸಿದ್ದಾಳೆ. ಕ್ರಿಸ್ತ ಯೇಸುವಿನಲ್ಲಿ ವಿಶೇಷವಾಗಿ ಅಭಿವ್ಯಕ್ತವಾದರೂ ಮೂಲ ತತ್ತ್ವವಾದ ಕ್ರಿಸ್ತನೂ ಯೇಸುವೂ ಒಂದೇ ಅಲ್ಲ ಎಂಬುದು ಆಕೆಯ ಭಾವನೆ. ಕ್ರಿಸ್ತ ಮಾನವರ ಶಾಪಕ್ಕಾಗಿ ಶಿಲುಬೆಗೆ ಏರಿ ದೇಹತ್ಯಾಗ ಮಾಡಿದ್ದಕ್ಕಾಗಿ ಇತರ ಕ್ರೈಸ್ತಮತ ಸಂಸ್ಥೆಯವರಂತೆ ಯಾರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿಲ್ಲವೆಂದು ಈ ಸಂಘದವರು ನಂಬಿರುತ್ತಾರೆ. ಪಾಪ ಪರಿಹಾರ ಮಾಡಿಕೊಳ್ಳಲು ಇರುವ ದಾರಿ ಒಂದೇ. ಅದು ಪಾಪವೆಸಗದಿರುವುದು. ಇತರ ಕ್ರೈಸ್ತ ಮತ ಸಂಸ್ಥೆಗಳಂತೆ ಈ ಸಂಸ್ಥೆಯೂ ಕ್ರೈಸ್ತಧರ್ಮಬೋಧೆಯನ್ನು ಅಂಗೀಕರಿಸುತ್ತದೆ. ಎಡ್ಡಿ ಹೊಸದಾಗಿ ತೋರಿದ ತತ್ತ್ವದೃಷ್ಟಿಯಿಂದ ಈ ಸಂಘದವರು ಬೈಬಲ್ಲನ್ನು ಅಧ್ಯಯನ ಮಾಡುತ್ತಾರೆ. ಅದರ ಭಾಗಗಳಿಗೆ ಪರತತ್ತ್ವದೃಷ್ಟಿಯಿಂದ ಅರ್ಥವನ್ನು ಕಲ್ಪಿಸುತ್ತಾರೆ. ಬೈಬಲ್ಲನ್ನು ಪದಶಃ ಅರ್ಥ ಮಾಡುವುದಿಲ್ಲ. ಅಲ್ಲಿಯ ಪದಗಳಿಗೆ ಅಂತರಾರ್ಥ ಅಥವಾ ಗೂಢಾರ್ಥವನ್ನು ಹುಡುಕುತ್ತಾರೆ. ಮುಖ್ಯವಾಗಿ ಎಡ್ಡಿ ಬರೆದ (1875) ಸೈನ್ಸ್ ಅಂಡ್ ಹೆಲ್ತ್ ವಿತ್ ಕೀ ಟು ದಿ ಸ್ಕ್ರಿಪ್ಚರ್ಸ್ ಎಂಬ ಗ್ರಂಥವೂ ಜೇಮ್ಸ್ ರಾಜನ ಕಾಲದ ಬೈಬಲ್ ಪಾಠವೂ ಕ್ರಿಶ್ಚನ್ ಸೈನ್ ಪಂಥದವರಿಗೆ ಆಧಾರ ಗ್ರಂಥಗಳೆನಿಸಿವೆ.

	ಕ್ರಿಶ್ಚನ್ ಸೈನ್ಸ್ ಚಳವಳಿ ಅದಕ್ಕಿಂತ ವಿಶಾಲವಾದ ಒಂದು ತತ್ತ್ವಪಂಥದ ಒಂದು ಭಾಗ. ಇಮ್ಯಾನ್ಯುಯೆಲ್ ಸ್ವೆಡೆನ್‍ಬೊರ್ಗ್ ಎಂಬ ಅನುಭಾವಿಯ ತತ್ತ್ವದಿಂದ ಅದು ತನ್ನ ಆರಂಭ ದೆಶೆಯಲ್ಲಿ ಸ್ಫೂರ್ತಿ ಪಡೆಯಿತು. ಪ್ರೇತಪ್ರಪಂಚದೊಡನೆ ಸಂಬಂಧವನ್ನು ಬೆಳೆಸುವುದಕ್ಕಾಗಿ ಏರ್ಪಟ್ಟ ಸ್ಪಿರಿಚ್ಯುಯಲಿಸಮ್ ಮತ್ತು ಮಾನಸಿಕ ರೋಗಗಳನ್ನು ನಿವಾರಿಸಲು ಉಪಯೋಗದಲ್ಲಿದ್ದ ಹಿಪ್ನಾಟಿಸಮ್, ಆಟೋಸಜೆಷನ್ (ಸ್ವಪ್ರೇರಣೆ) ಮುಂತಾದ ವಿಧಾನಗಳಿಂದಲೂ ಅದು ಸ್ವಲ್ಪಮಟ್ಟಿಗೆ ಪ್ರೇರಿತವಾಯಿತು. ಫಿನಿಯಸ್ ಪಾರ್ಕ್‍ಹಸ್ರ್ಟ್ ಕ್ವಿಂಬಿ ಎಂಬುವನ ನ್ಯೂ ಥಾಟ್ ಎಂಬ ಚಿಕಿತ್ಸಾವಿಧಾನದಿಂದಲೂ ಎಡ್ಡಿ ಸ್ಫೂರ್ತಿ ಪಡೆದಳು. ಅನುಕೂಲ ಭಾವನೆಗಳನ್ನು ಉದ್ಭೋಧಿಸುವುದರ ಮೂಲಕ ದೈಹಿಕ ಹಾಗೂ ಮಾನಸಿಕ ಉಲ್ಬಣಗಳನ್ನು ಹತೋಟಿಗೊಳಿಸಬಹುದೆಂಬುದು ನ್ಯೂಥಾಟ್ ಪಂಥದ ಧೋರಣೆ. ಆದರೆ ಆ ಅನುಕೂಲ ಭಾವನೆಗಳು ಧಾರ್ಮಿಕವಾಗಿರಬೇಕೆಂದು ಹೇಳುವುದು ಕ್ರಿಶ್ಚನ್ ಸೈನ್ಸ್ ಪಂಥದ ಒಂದು ವೈಶಿಷ್ಟ್ಯ.

	ಮೊದಲಿಗೆ ಕೇವಲ ಒಂದು ಭಾವನೆಯಾಗಿದ್ದ ಕ್ರಿಶ್ಚನ್ ಸೈನ್ಸ್ 1875ರಲ್ಲಿ ಚರ್ಚ್ ರೂಪ ತಾಳಿತು. ಮೊಟ್ಟಮೊದಲಿಗೆ ಆ ಹೊಸ ಕ್ರೈಸ್ತಸಂಸ್ಥೆ ಸ್ಥಾಪಿತವಾದದ್ದು ಬಾಸ್ಟನ್ ನಗರದಲ್ಲಿ. ಅದರ ಕಾರ್ಯನಿಬಂಧನೆಗಳನ್ನು ರೂಪಿಸಿದವಳೂ ಎಡ್ಡಿಯೇ. ಅದು ಪ್ರಪಂಚದ ಇತರ ಭಾಗಗಳಲ್ಲಿ ಹುಟ್ಟಿಕೊಂಡ ಕ್ರಿಶ್ಚನ್ ಸೈನ್ಸ್ ಚರ್ಚುಗಳಿಗೆ ಮಾತೃಪ್ರಾಯವಾದದ್ದು. ಅದರ ಮೂರುಸಾವಿರ ಶಾಖೆಗಳ ಸದಸ್ಯರ ಸಂಖ್ಯೆ ಸುಮಾರು ಮೂರುಲಕ್ಷ. ಈ ಮೂಲಸಂಸ್ಥೆ ಐದು ಸದಸ್ಯರ ಕಾರ್ಯನಿರ್ವಾಹಕ ಮಂಡಲಿಯ ಆಡಳಿತಕ್ಕೆ ಒಳಪಟ್ಟಿದೆ. ಮಾನಸಿಕ ಮತ್ತು ದೈಹಿಕ ಕಾಯಿಲೆಗಳನ್ನು ಗುಣಪಡಿಸುವುದು, ಉಪನ್ಯಾಸಗಳ ಮೂಲಕ, ವಿದ್ಯಾಸಂಸ್ಥೆಗಳ ಮೂಲಕ ಅದರ ತತ್ತ್ವವನ್ನು ಪ್ರಚಾರ ಮಾಡುವುದು, ಸಂಸ್ಥೆಯ ಮೂಲ ಉದ್ದೇಶ. ಉಪ ಶಾಖೆಗಳು ಮೂಲಸಂಸ್ಥೆಗೆ ಹೊಂದಿಕೊಂಡಿದ್ದು ಕಾರ್ಯನಿರ್ವಾಹಕ ಮಂಡಲಿಯ ಮೂಲಕ ಅದೇ ವಿಧವಾದ ಕೆಲಸಗಳನ್ನು ನೆರವೇರಿಸುತ್ತವೆ.

	ಕ್ರಿಶ್ಚನ್ ಸೈನ್ಸ್‍ನಲ್ಲಿ ಆಸಕ್ತರಾದವರೆಲ್ಲರೂ ಈ ಸಂಸ್ಥೆಗಳ ಸದಸ್ಯರಾಗಿಲ್ಲ. ಆದರೂ ಆಸಕ್ತರೆಲ್ಲರೂ ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿದ್ದಾರೆ.	

	ಕ್ರಿಶ್ಚನ್ ಸೈನ್ಸ್ ತತ್ತ್ವಶುದ್ಧ ಚಿತ್‍ಪ್ರಧಾನ ಏಕತ್ವತತ್ತ್ವ. ಅದ್ವೈತದಂತೆ ಇದು ಜಡವಾದ ಜಗತ್ತನ್ನು ತೋರಿಕೆಯೆಂದು ಭಾವಿಸುತ್ತದೆ. ಇಲ್ಲಿ ಅಮಂಗಳಕರವಾದದ್ದು ಅಶಿಷ್ಟವಾದದ್ದೂ ಯಾವುದೂ ಇಲ್ಲ ಎಂದು ವಾದಿಸುತ್ತದೆ. ಇದು ಅಪ್ಪಟ ಆಶಾವಾದ. ಈ ಎರಡು ಅಂಶಗಳಲ್ಲಿ ಇದು ಸಾಂಪ್ರದಾಯಿಕ ಕ್ರೈಸ್ತ ಮತಕ್ಕಿಂತ ಭಿನ್ನವಾದದ್ದಾಗಿದೆ. ಚಿತ್ತಶುದ್ಧಿಗೂ ಆತ್ಮಶುದ್ಧಿಗೂ ಆತ್ಮಶಾಂತಿಗೂ ಇದು ವಿಶೇಷ ಬೆಲೆ ಕೊಡುತ್ತದೆ. ಅವೆರಡೇ ಆತ್ಮದ ನೆಮ್ಮದಿ ಮತ್ತು ಆರೋಗ್ಯಕ್ಕೆ ಸಾಧನಗಳು ಎಂದು ವಾದಿಸುತ್ತದೆ. ಜರೂರಾದ ಸಂದರ್ಭಗಳಲ್ಲಿ ಸದಸ್ಯರು ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ಪಡೆಯಬಹುದೆಂದು ಎಡ್ಡಿ ಅನುಮತಿ ಕೊಟ್ಟಿದ್ದಳು. ಆದರೆ ಅವರಲ್ಲಿ ಅತಿವಾದಿಗಳಾದ ಕೆಲವರು ಅಂಥ ಸಂದರ್ಭಗಳಲ್ಲೂ ಕ್ರಿಶ್ಚನ್ ಸೈನ್ಸ್ ವಿಧಾನವನ್ನು ಬಿಟ್ಟು ಬೇರೆ ಎಲ್ಲ ಬಗೆಯ ವೈದ್ಯಕೀಯ ಚಿಕಿತ್ಸೆಗಳನ್ನೂ ನಿರಾಕರಿಸಿದರು. 									(ಜೆ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ